ಬ್ಯಾಡ್ಜರ್ - 
	ಕಾರ್ನಿವೊರ ಗಣದ ಮಸ್ಟೆಲಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಮಾಂಸಾಹಾರಿ ಸ್ತನಿಗಳಿಗಿರುವ ಸಾಮಾನ್ಯ ಹೆಸರು. ಭಾರತವೂ ಸೇರಿದಂತೆ ಆಫ್ರಿಕ, ಅರೇಬಿಯ, ತುರ್ಕಿಸ್ತಾನಗಳಲ್ಲಿ ಕಾಣದೊರೆಯುವ ಹನಿಬ್ಯಾಡ್ಜರ್ (ಮೆಲಿವೊರ ಕ್ಯಾಪೆನ್ಸಿಸ್), ಟಿಬೆಟ್, ಉತ್ತರ ಬರ್ಮ ಹಾಗೂ ದಕ್ಷಿಣ ಚೀನಗಳ ದಟ್ಟಕಾಡುಗಳಲ್ಲಿ ಸಿಕ್ಕುವ ಓಲ್ಡ್ ವಲ್ಡ್ ್ ಬ್ಯಾಡ್ಜರ್ (ಮೆಲಿಸ್ ಮೆಲಿಸ್), ಕೆನಡ ಹಾಗೂ ಅಮೆರಿಕದ ಬ್ಯಾಡ್ಜರ್ (ಟ್ಯಾಕ್ಸಿಡಿಯ ಟ್ಯಾಕ್ಸನ್) ಹಾಗೂ ಚೀನ, ಫಾರ್ಮೋಸ, ಬರ್ಮ, ಇಂಡೊಚೀನ, ಜಾವ, ಬೋರ್ನಿಯೊಗಳಲ್ಲಿ ಕಂಡುಬರುವ ಫೆರೆಟ್ ಬ್ಯಾಡ್ಜರ್ (ಮೆಲೊಗೇಲ್ ಪ್ರಭೇದ)-ಇವೆಲ್ಲಕ್ಕು ಈ ಹೆಸರು ಅನ್ವಯವಾಗುತ್ತದೆ.

	ಪ್ರಸಕ್ತ ಲೇಖನದಲ್ಲಿ ಅಮೆರಿಕನ್ ಬ್ಯಾಡ್ಜರ್‍ನ ವಿವರಣೆ ಇದೆ.

	ಶುಷ್ಕ ಹಾಗೂ ಬಯಲುಸೀಮೆಗಳಲ್ಲಿ ಇದು ವಾಸಿಸುತ್ತದೆ. ದೇಹದ ಉದ್ದ 42-72 ಸೆಂಮೀ. 10-15 ಸೆಂಮೀ, ಉದ್ದದ ಬಾಲವುಂಟು. ಬ್ಯಾಡ್ಜರಿನ ತೂಕ 3.5-10 ಕೆಜಿ. ದೇಹದ ಬಣ್ಣ ಬೂದು ಇಲ್ಲವೆ ಕೆಂಪು. ಮುಸುಡಿನ ತುದಿಯಿಂದ ಭುಜದವರೆಗೆ ಚಾಚಿರುವ ಬಿಳಿ ಪಟ್ಟೆ, ಕೆನ್ನೆಯ ಮೇಲಿರುವ ಕಪ್ಪು ಮಚ್ಚೆ. ಬಿಳಿಬಣ್ಣದ ಕತ್ತು ಹಾಗೂ ಹೊಟ್ಟೆ ಇದರ ಇನ್ನಿತರ ಲಕ್ಷಣಗಳು. ದೇಹದ ಅಕ್ಕಪಕ್ಕಗಳ ಕೂದಲು ಉದ್ದವಾಗಿವೆ. ಗುದದ್ವಾರದ ಬಳಿ ವಾಸನಾ ಗ್ರಂಥಿಗಳುಂಟು.

	ಇದು ಸಾಧಾರಣವಾಗಿ ಒಂಟಿಯಾಗಿ ಓಡಾಡುತ್ತದೆ. ಸಾಮಾನ್ಯವಾಗಿ ಹಗಲಿನಲ್ಲಿ ಚಟುವಟಿಕೆಯಿಂದಿರುವ ಪ್ರಾಣಿಯಾದರೂ ಮನುಷ್ಯನಿಗೆ ಹೆದರಿ ನಿಶಾಚರಿಯಾಗಿದೆ. ನೆಲದಲ್ಲಿ ಬಿಲತೋಡಿ ವಾಸಿಸುತ್ತದೆ. ಮೊಲ, ಇಲಿ ಮುಂತಾದ ದಂಶಕಗಳು ಇದರ ಆಹಾರ.

	ಇದರ ಸಂತಾನವೃದ್ಧಿಯ ಶ್ರಾಯ ಆಗಸ್ಟ್-ಸೆಪ್ಟಂಬರ್. 6 ತಿಂಗಳ ಗರ್ಭಾವಸ್ಥೆಯ ತರುವಾಯ 1-5 ಮರಿಗಳು ಹುಟ್ಟುವುವು. ಬ್ಯಾಡ್ಜರಿನ ಆಯಸ್ಸು ಸುಮಾರು 13 ವರ್ಷಗಳೆನ್ನಲಾಗಿದೆ. ಬ್ಯಾಡ್ಜರಿನ ತುಪ್ಪುಳಿನಿಂದ ಮೇಲುಡುಪನ್ನು ತಯಾರಿಸುವುದಿದೆ. ಕುಂಚಗಳನ್ನೂ ಇದರ ಕೂದಲಿನಿಂದ ತಯಾರಿಸುವುದುಂಟು.
(ಬಿ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ